ತಿಪ್ಪಣಾರ್ಯ -
ಸುಮಾರು 1750. ಹನುಮದ್ವಿಲಾಸ, ಕಾಳಿಂಗಮರ್ದನ, ಕುಚೇಲೋಪಾಖ್ಯಾನ (ಸುಧಾಮ ಚರಿತ್ರೆ), ಕೃಷ್ಣಬಾಲಲೀಲೆ ಎಂಬ ಯಕ್ಷಗಾನಗಳ ಕರ್ತೃ. ಕವಿಚರಿತೆಕಾರರು ಈತನನ್ನು ತಿಪ್ಪಯಾರ್ಯ ಎಂದಿದ್ದಾರೆ. ರಂಗಾರ್ಯ ಮತ್ತು ಗಿರಿಯಮ್ಮ ಇವರ ಮಗನಾದ ಈತ ತನ್ನ ಪಿತಾಮಹನನ್ನು ಸರಸಕವಿ ನರಸಿಂಹಾರ್ಯ (ನರಕಂಠೀರವ) ಎಂದು ಹೇಳಿಕೊಂಡಿದ್ದಾನೆ. ಈತನ ಗುರು ಚಂದ್ರರಸಾಯನ. ಈತ ಮಾಧ್ವ ಸಂಪ್ರದಾಯದ ಉಲಚುಕಮ್ಮಿ ಬ್ರಾಹ್ಮಣನೆಂದೂ ವಿಶ್ವಾಮಿತ್ರ ಗೋತ್ರದ ಯಜುಶ್ಯಾಖಾಧ್ಯಾಯಿಯೆಂದೂ ಈತನ ಗ್ರಂಥದಿಂದ ತಿಳಿದುಬರುತ್ತದೆ.

ಕವಿ ಕುಲವೃತ್ತಿಯಾಗಿದ್ದ ಶ್ಯಾನುಭೋಗಿಕೆಯನ್ನು ಮಾಡುತ್ತಿದ್ದನೆಂದೂ ಸರ್ಕಾರದ ಹಣವನ್ನು ದುರುಪಯೋಗಪಡಿಸಿಕೊಂಡ ಆಪಾದನೆ ಮೇಲೆ ಕಾರಾಗೃಹ ಸೇರಿ ಅಲ್ಲಿ ಭಗವಚ್ಚಿಂತನಾಶೀಲನಾಗಿರುತ್ತಿದ್ದನೆಂದೂ ಒಂದು ರಾತ್ರಿ ಶ್ರೀ ಮದಾಂಜನೇಯ ಸ್ವಾಮಿ ಸ್ವಪ್ನದಲ್ಲಿ ಕಾಣಿಸಿಕೊಂಡು ಕುಲದೇವತೆ ಶ್ರೀ ಖಾದ್ರೀ ನೃಸಿಂಹಾಂಕಿತದಿಂದ ಹನುಮನ ಕಥೆಯನ್ನು ಹೇಳೆಂದು ಆಜ್ಞಾಪಿಸಿದ ಮೇರೆಗೆ ಹನುಮದ್ವಿಲಾಸವನ್ನು ರಚಿಸಿದನೆಂದೂ ತಿಳಿದುಬರುತ್ತದೆ.
ಕೃಷ್ಣ ಬಾಲಲೀಲೆಯಲ್ಲಿ ಕನ್ನಡ, ತೆಲುಗು, ತಮಿಳು, ಉರ್ದು, ಮರಾಠಿ- ಈ ಐದೂ ಭಾಷೆಗಳ ಪದ್ಯಗಳನ್ನು ಅಳವಡಿಸಿರುವುದು ಒಂದು ವೈಶಿಷ್ಟ್ಯ.

ತನ್ನ ಎಲ್ಲ ಗ್ರಂಥಗಳನ್ನೂ ಈತ ಯಕ್ಷಗಾನಗಳೆಂದು ಕರೆದಿದ್ದಾನಾದರೂ ಇವುಗಳಲ್ಲಿ ಪಾತ್ರಗಳಾವುವೂ ಬರುವುದಿಲ್ಲ; ಕಥೆಯ ನಿರೂಪಣೆ ವಿವಿಧ ಛಂದಸ್ಸಿನ ಮಟ್ಟುಗಳಿಂದ ಮುಂದುವರಿಯುತ್ತದೆ. ಹಲವಾರು ವೃತ್ತ, ಕಂದ, ರಗಳೆಗಳು, ಕುರುಕು ಜಂಪೆ, ಸೀಸಪದ್ಯ, ದ್ವಿಪದಿ - ಇವೆಲ್ಲವನ್ನೂ ಇವನ ಕೃತಿಗಳಲ್ಲಿ ಕಾಣಬಹುದಾಗಿದೆ.
(ಎಸ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ